ಮಂಗಳವಾರ, ಸೆಪ್ಟೆಂಬರ್ 27, 2011

ನಮ್ಮ ಎಲ್ಲಾ ಅವಶ್ಯಕತೆಗಳನ್ನು ದೇವರ ಮಾರ್ಗಗಳಲ್ಲಿ ಹೇಗೆ ಪೂರೈಸಿಕೊಳ್ಳುವುದು.


"ಆದರೆ ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ಪ್ರಭಾವದಲ್ಲಿರುವ ತನ್ನ ಐಶ್ವರ್ಯಕ್ಕನುಗುಣವಾಗಿ ನಿಮ್ಮ ಎಲ್ಲಾ ಅವಶ್ಯಕತೆಯನ್ನು ಒದಗಿಸುವನು". (ಫಿಲಿಪ್ಪಿಯದವರಿಗೆ ೪:೧೯)
"ಆದುದರಿಂದ ನಾನು ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ನೀವು ಏನು ಕುಡಿಯಬೇಕು ಎನ್ನುವ ವಿಷಯಕ್ಕಾಗಲಿ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಧರಿಸಬೇಕೆಂದಾಗಲಿ ಚಿಂತೆ ಮಾಡಬೇಡಿರಿ; ಆಹಾರಕ್ಕಿಂತ ಜೀವವೂ ಹಾಗೂ ಬಟ್ಟೆಗಿಂತ ದೇಹವೂ ಹೆಚ್ಚಿನದಲ್ಲವೇ? ಆಕಾಶದ ಪಕ್ಷಿಗಳನ್ನು ನೋಡಿರಿ: ಏಕೆಂದರೆ ಅವು ಬಿತ್ತುವುದಿಲ್ಲ, ಅಥವಾ ಕೊಯ್ಯುವುದಿಲ್ಲ,ಇಲ್ಲವೇ ಕಣಜದಲ್ಲಿ ಕೂಡಿಡುವುದಿಲ್ಲ; ಆದಾಗ್ಯೂ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ? ನಿಮ್ಮಲ್ಲಿ ಯಾರಾದರೂ ಚಿಂತೆ ಮಾಡಿ ತನ್ನ ನೀಳಕ್ಕೆ ಒಂದು ಮೊಳ ಉದ್ದ ಸೇರಿಸಲು ಸಾಧ್ಯವೇ? ಮತ್ತು ನೀವು ಬಟ್ಟೆಗಾಗಿ ಚಿಂತಿಸುವುದೇಕೆ? ಹೊಲದಲ್ಲಿರುವ ತಾವರೆಗಳು ಹೇಗೆ ಬೆಳೆಯುತ್ತವೆಂದು ಗಮನಿಸಿರಿ; ಅವು ದುಡಿಯುವುದಿಲ್ಲ ಇಲ್ಲವೆ ನೇಯುವುದಿಲ್ಲ: ಮತ್ತು ಆದಾಗ್ಯೂ ನಾನು ನಿಮಗೆ ಹೇಳುತ್ತಿದ್ದೇನೆ, ಸೊಲೊಮೋನನು ಸಹ ತನ್ನ ಎಲ್ಲಾ ವೈಭವದಲ್ಲಿಯೂ ಇವುಗಳಲ್ಲಿ ಒಂದರಂತೆಯೂ ಧರಿಸಿರಲಿಲ್ಲ, ಹೀಗಿರುವುದರಿಂದ, ಈ ಹೊತ್ತು ಇದ್ದು ಮತ್ತು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸುವನಲ್ಲವೆ, ಓ ಅಲ್ಪ ನಂಬಿಕೆಯುಳ್ಳವರೇ? ಆದುದರಿಂದ ನಾವು ಏನು ತಿನ್ನಬೇಕು? ಅಥವಾ ನಾವು ಏನು ಕುಡಿಯಬೇಕು? ಅಥವಾ ನಾವು ಏನು ಧರಿಸಬೇಕು? ಎಂದು ಹೇಳುತ್ತಾ ಚಿಂತೆ ಮಾಡಬೇಡಿರಿ. (ಏಕೆಂದರೆ ಇವೆಲ್ಲವುಗಳಿಗಾಗಿ ಅವಿಶ್ವಾಸಿಗಳು ತವಕಪಡುತ್ತಾರೆ:) ಏಕೆಂದರೆ ಇವೆಲ್ಲವುಗಳು ನಿಮಗೆ ಅವಶ್ಯವೆಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ಆದರೆ ನೀವು ಮೊದಲು ದೇವರ ರಾಜ್ಯವನ್ನೂ ಮತ್ತು ಆತನ ನೀತಿಯನ್ನೂ ಹುಡುಕಿರಿ; ಮತ್ತು ಇವೆಲ್ಲವುಗಳೂ ನಿಮಗೆ ಸೇರಿಸಲ್ಪಡುವವು. ಆದುದರಿಂದ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ: ಏಕೆಂದರೆ ನಾಳೆಯು ಅದರ ಸಂಗತಿಗಳಿಗಾಗಿ ತಾನೇ ಚಿಂತಿಸುವುದು. ಆ ದಿನಕ್ಕೆ ಅದರ ಕಷ್ಟಗಳು ಧಾರಾಳವಾಗಿ ಸಾಕು" (ಮತ್ತಾಯ ೬:೨೫-೩೪).
ಯಾವ ಯಾವ ಮಾರ್ಗಗಳಿಂದ ಮನುಷ್ಯರಾದ ನಾವು ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತೇವೆನ್ನುವುದು ದೇವರ ದೃಷ್ಟಿಯಲ್ಲಿ ಬಹು ಮುಖ್ಯವಾಗಿದೆ.
ಪ್ರತಿಯೊಬ್ಬರೂ ಈ ಭೂಲೋಕದಲ್ಲಿ ತಮಗೆ ತೋಚಿದ ರೀತಿಯಲ್ಲಿ ತಮ್ಮ ತಮ್ಮ ಅವಶ್ಯಕತೆಗಳನ್ನು, ಕೊರತೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮಾನವರಾದ ನಾವು ಯಾವ-ಯಾವ ರೀತಿಯಲ್ಲಿ ಅಂದರೆ ನೀತಿ ಹಾಗೂ ಅನೀತಿ ಅಥವಾ ದುರ್ನೀತಿಯ ಮಾರ್ಗಗಳಿಂದ ನಮ್ಮ ನಮ್ಮ ಅವಶ್ಯಕತೆಗಳನ್ನು ಹಾಗೂ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದರಿಂದ ಆಗುವ ಪರಿಣಾಮಗಳೇನು? ಸತ್ಯದೇವರು, ನೀತಿವಂತನಾದ ದೇವರು, ಪರಿಶುದ್ಧನಾದ ದೇವರು ಮಾನವರಾದ ನಮ್ಮ ಪ್ರತಿಯೊಂದು ಕ್ರಿಯೆಗಳನ್ನು ಗಮನಿಸುತ್ತಿದ್ದಾನೆ ಮಾತ್ರವಲ್ಲದೆ ಸ್ವರ್ಗದಲ್ಲಿರುವ ಪುಸ್ತಕಗಳಲ್ಲಿ ಪ್ರತಿಯೊಂದನ್ನೂ ದಾಖಲು ಮಾಡುತ್ತಿದ್ದಾನೆ (ಬರೆದಿಡುತ್ತಿದ್ದಾನೆ). ಹೀಗಾಗಿ ಯಾವುದೇ ಮನುಷ್ಯನೂ ಎಂದೆಂದಿಗೂ ತಾನು ಮಾಡಿದ ಹಾಗೂ ಮಾಡುತ್ತಿರುವ ಕಾರ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಹಳಷ್ಟು ಜನರು ತಾವು ಸತ್ತು ಹೋದರೆ, ತಮ್ಮೊಂದಿಗೆ ತಾವು ಮಾಡಿದ ಎಲ್ಲಾ ಪಾಪಗಳೂ ಹಾಗೂ ಅನೀತಿಯೂ ಮುಗಿದು ಹೋಗುತ್ತದೆಯೆಂದು ನೆನೆಸುತ್ತಾರೆ. ದೇವರು ಪರಿಶುದ್ಧನು, ನೀತಿವಂತನು ಮತ್ತು ದೇವರನ್ನು ನೋಡುವ ಯೋಗ್ಯತೆ ಹಾಗೂ ಅರ್ಹತೆಯನ್ನು ಪ್ರತಿಯೊಬ್ಬ ಮಾನವನೂ ಕಳೆದುಕೊಂಡಿದ್ದಾನೆ. ಹೀಗಾಗಿ ನಾವು ನಮಗೆ ಸರಿ ಕಂಡಂತೆ, ನಮ್ಮದೇ ಆದ ರೀತಿ-ನೀತಿಗಳಿಗನುಗುಣವಾಗಿ ಈ ಒಂದು ಜೀವನವನ್ನು ಜೀವಿಸುತ್ತ ದೇವರನ್ನು ಬಹಳ ಮಟ್ಟಿಗೆ ನಮ್ಮ ಲಕ್ಷ್ಯಕ್ಕೆ ತರದೆ ಮಹಾ ಪಾಪಾಪರಾಧಗಳಲ್ಲಿ ತೊಡಗಿದ್ದೇವೆ.
ಕರ್ತನು ಪರಿಶುದ್ಧನೂ ನೀತಿವಂತನೂ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವವನೂ ಆಗಿರುವುದರಿಂದ ತನ್ನಲ್ಲಿ ಪ್ರತಿಯೊಬ್ಬ ಮಾನವನೂ ಭರವಸೆಯಿಟ್ಟು ನೀತಿಯಲ್ಲಿ ಜೀವಿಸುತ್ತ, ನೀತಿಯಿಂದಲೇ ಗಳಿಸುತ್ತ, ಅದರಲ್ಲಿ ಸ್ವಲ್ಪ ಭಾಗವನ್ನು ಭವಿಷ್ಯಕ್ಕೆಂದು ಸರಿಯಾದ ಮಾರ್ಗಗಳಲ್ಲಿ ಕೂಡಿಡುತ್ತ, ದೇವರಿಗೆ ಭಯಪಡುತ್ತ, ಯಾವುದೇ ಕೇಡಿನ ಮಾರ್ಗಗಳಿಂದ ಸಂಪಾದಿಸದೆ, ನೀತಿ-ಪರಿಶುದ್ಧತೆಯಲ್ಲಿ ಜೀವಿಸುವುದನ್ನು ಅಪೇಕ್ಷಿಸುತ್ತಾನೆ. ಆದರೆ ಸರಿಯಾದ ರೀತಿಯಲ್ಲಿ ದೇವರ ಭಯವಿಲ್ಲದ ಮಾನವನು ’ಏನಾದರೂ ಆಗಲಿ’ ಎನ್ನುವ ಮನೋಭಾವನೆಯಿಂದ, ದೇವರನ್ನು ಕಸಕ್ಕಿಂತಲೂ ಕಡೆಯಾಗಿ ನಿರ್ಲಕ್ಷಿಸುತ್ತ, ತನ್ನ ಮನಬಂದಂತೆ ಜೀವಿಸುವುದನ್ನು ದೇವರು ಹಗಲಿರುಳೂ ಸಹಿಸುತ್ತಿದ್ದಾನೆ.ಆದರೆ ದೇವರ ಸಹನೆಗೂ ಒಂದು ಮಿತಿಯಿದೆ, ಕರ್ತನ ಸಹನೆಯ ಕಟ್ಟೆಯೊಡೆದಾಗ, ಆತನ ಸನ್ನಿಧಿಯಿಂದ ನ್ಯಾಯತೀರ್ಪುಗಳು ಮಾನವನ ಮೇಲೆ ಬರುತ್ತವೆ. ದೇವರ ವಾಕ್ಯವು ಹೇಳುತ್ತದೆ "ಜೀವಿಸುವ ದೇವರ ಕೈಗಳಲ್ಲಿ ಸಿಕ್ಕಿಬೀಳುವುದು ಭಯಂಕರ ಸಂಗತಿಯಾಗಿದೆ" (ಇಬ್ರಿಯರಿಗೆ ೧೦:೩೧).
ಆದುದರಿಂದ ಪ್ರಿಯ ಸ್ನೇಹಿತನೇ, ನೀನು ಹೇಗೆ ಜೀವಿಸುತ್ತೀ ಎನ್ನುವುದು ಕೇವಲ ಈ ಜೀವಿತಕ್ಕೆ ಮಾತ್ರ ಸೀಮಿತವಲ್ಲ, ನಿತ್ಯತ್ವಕ್ಕೂ ತನ್ನ ಪ್ರಭಾವವನ್ನು ಹೊಂದಿದೆ, ಏಕೆಂದರೆ ಮಾನವರಾದ ನಾವು ನಿತ್ಯವೂ ನಿರಂತರವೂ ಜೀವಿಸುವವರಾಗಿದ್ದೇವೆ, ಆದರೆ ಎಲ್ಲಿ ಅಂದರೆ ಸ್ವರ್ಗದಲ್ಲಿಯೋ ಅಥವಾ ನರಕದಲ್ಲಿಯೋ ಎನ್ನುವುದನ್ನು ನಿರ್ಧರಿಸುವವರೂ ನಾವೇ ಆಗಿದ್ದೇವೆ, ದೇವರು ಪ್ರತಿಯೊಬ್ಬ ಮಾನವನೂ ಪಾಪ ಕ್ಷಮಾಪಣೆಯನ್ನು ಹಾಗೂ ಆತ್ಮರಕ್ಷಣೆಯನ್ನು, ಪಾಪ ಪರಿಹಾರಕನೂ ಮತ್ತು ಆತ್ಮರಕ್ಷಕನೂ ಆಗಿರುವ ಯೇಸುಕ್ರಿಸ್ತನಲ್ಲಿ ಹೊಂದಿಕೊಂಡು ದೇವರಿಗಾಗಿ ಜೀವಿಸುವಂತೆ ಪ್ರತಿಯೊಬ್ಬ ಮನುಷ್ಯನನ್ನೂ ಕರೆಯುತ್ತಿದ್ದಾನೆ, "ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎನ್ನುವುದು ನಂಬಿಗಸ್ತ ಮಾತಾಗಿದ್ದು, ಸರ್ವರ ಅಂಗೀಕಾರಕ್ಕೆ ಯೋಗ್ಯವಾದದ್ದಾಗಿದೆ" (೧ ತಿಮೊಥಿ ೧:೧೫). "ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಬರಬೇಕೆಂಬುದು ಆತನ ಚಿತ್ತವಾಗಿದೆ. ಏಕೆಂದರೆ ದೇವರು ಒಬ್ಬನೇ ಇದ್ದಾನೆ, ಹಾಗೂ ದೇವರಿಗೂ ಮತ್ತು ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ, ಆ ಮನುಷ್ಯನು ಕ್ರಿಸ್ತ ಯೇಸುವೇ; ಎಲ್ಲರಿಗೋಸ್ಕರ ವಿಮೋಚನಕ್ರಯವಾಗಿ ತನ್ನನ್ನೇ ಒಪ್ಪಿಸಿಕೊಟ್ಟನು" (೧ ತಿಮೊಥಿ ೨:೪-೬). ಪಾಪದಲ್ಲಿ ಮುಳುಗಿ, ತನ್ನ ನಾಶನದ ಅವಸ್ಥೆಯನ್ನು ಗ್ರಹಿಸದಿರುವ ಅನೇಕಾನೇಕ ಮನುಷ್ಯರು, ದೇವರಿಂದ ದೂರವಾಗಿ ಜೀವಿಸುತ್ತ ನಾಶವಾಗುತ್ತಿದ್ದಾರೆ.
ಹೀಗಿರುವುದರಿಂದ ನಿನ್ನ ಪರಿಸ್ಥಿತಿಯೇನು? ನೀನು ಒಂದು ವೇಳೆ ಈ ದಿನವೇ ಭೂಲೋಕ ಬಿಟ್ಟು ಹೋಗುವುದಾದರೆ ಮರುಕ್ಷಣದಲ್ಲಿ ಸ್ವರ್ಗದಲ್ಲಿರುತ್ತೀಯೋ ಅಥವಾ ಭಯಂಕರ ಬೆಂಕಿಯಲ್ಲಿರುತ್ತೀಯೋ (ನರಕದಲ್ಲಿರುವಿಯೋ). ಈ ಪ್ರಶ್ನೆಗೆ ಉತ್ತರ ನೀನೇ ಹೇಳಬೇಕು. ಇದು ನನ್ನ ಮಾತುಗಳಾಗಿದ್ದರೆ ನೀನು ನಿರ್ಲಕ್ಷಿಸಬಹುದು, ಆದರೆ ಜೀವಿಸುವ ದೇವರ ಮಾತುಗಳನ್ನು ನಿರ್ಲಕ್ಷಿಸಿದರೆ ಆಗುವ ಪರಿಣಾಮಗಳನ್ನು ದಯಮಾಡಿ ಗ್ರಹಿಸಿಕೋ. ದೇವರು ನರಕವನ್ನು ಸೃಷ್ಟಿಸಿರುವುದು ಮನುಷ್ಯನಿಗೋಸ್ಕರವಲ್ಲ, ಆದರೆ ದುಷ್ಟ ಶಕ್ತಿಗಳಿಗೆ ಅಂದರೆ ಸೈತಾನನಿಗೆ ಹಾಗೂ ಅವನ ಹಿಂಬಾಲಕರಿಗೆ "ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ, ಸೈತಾನನಿಗೂ ಮತ್ತು ಅವನ ದೂತರಿಗೂ ಸಿದ್ಧ ಮಾಡಿರುವ ನಿತ್ಯ ಬೆಂಕಿಯೊಳಗೆ ಹೋಗಿರಿ" (ಮತ್ತಾಯ ೨೫:೪೧), ಆದರೆ ಮನುಷ್ಯನು ಯೇಸುಕ್ರಿಸ್ತನಲ್ಲಿ ಉಚಿತವಾಗಿ ದೊರೆಯುವ ಪಾಪ ಪರಿಹಾರವನ್ನು ಅಲಕ್ಷಿಸಿದರೆ, ತನ್ನ ಪಾಪಗಳ ಪ್ರತಿಫಲವಾದ ದೈಹಿಕ ಮರಣದ ಜೊತೆ-ಜೊತೆಗೆ ನಿತ್ಯಮರಣವನ್ನು ನರಕದಲ್ಲಿ ಆತ್ಮರೂಪದಲ್ಲಿ ಶಾಶ್ವತವಾಗಿ ಅನುಭವಿಸುವನು. (ರೋಮಾಪುರದವರಿಗೆ ೬:೨೩). ಬೇರೆ ಮಾತುಗಳಲ್ಲಿ ಹೇಳುವುದಾದರೆ ದೇವರಲ್ಲಿರುವ ನಿನ್ನ ಉನ್ನತ ಭವಿಷ್ಯವನ್ನು ಹೊಂದಿಕೊಳ್ಳುವುದು ಅಥವಾ ಹಾಳು ಮಾಡಿಕೊಳ್ಳುವುದು ನಿನ್ನ ಕೈಯಲ್ಲಿಯೇ ಇದೆ. ನಾವಿಲ್ಲಿ ೬೦,೭೦,೮೦ ಅಥವಾ ೧೦೦ ವರುಷಗಳವರೆಗೆ ಜೀವಿಸಬಹುದೇನೋ? ಆದರೆ ಶಾಶ್ವತವಾಗಿ ನಾವು ಜೀವಿಸುವ ಸ್ಥಳ ಸ್ವರ್ಗವೆಂಬ ದೇವರ ವಾಸ ಸ್ಥಳವಾದರೆ ನಾವೆಷ್ಟು ಧನ್ಯರು! ಇಲ್ಲವಾದರೆ ಯುಗಯುಗಾಂತರಗಳಲ್ಲಿಯೂ ಬೆಂಕಿಯ ಕೆರೆಯಲ್ಲಿ ನರಳಾಡುವ ಸ್ಥಿತಿಯನ್ನು ಅನುಭವಿಸುವುದೇಕೆ?
ಪ್ರಿಯ ಸ್ನೇಹಿತರೇ, ದೇವರು ನಮ್ಮನ್ನು ತನಗಾಗಿ ಸೃಷ್ಟಿಸಿದ್ದಾನೆ, ಹೀಗಾಗಿ ನಾವು ಆತನಿಗಾಗಿಯೇ ಜೀವಿಸಬೇಕು, ಆತನು ಒದಗಿಸಿಕೊಡುವವನಾಗಿದ್ದಾನೆ, ಆದರೆ ನಾವು ನಮಗೆ ಕರ್ತನು ಒದಗಿಸಿಕೊಟ್ಟ ಕೆಲಸವನ್ನು ಆತನಿಗೋಸ್ಕರವೆಂದು ಮಾಡುತ್ತ ಆತನಲ್ಲಿ ಭರವಸೆಯಿಟ್ಟು, ಸಕಲ ಪಾಪಗಳಿಂದ ದೂರವಿದ್ದುಕೊಂಡು ಜೀವಿಸುವುದು ನಮ್ಮ ಭಾಗ್ಯವಾಗಿದೆ, "ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ಪೂರ್ಣ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ, ಯುಕ್ತಿಯೂ ತಿಳುವಳಿಕೆಯೂ ಹಾಗೂ ಜ್ಞಾನವೂ ಇರುವುದಿಲ್ಲ" (ಪ್ರಸಂಗಿ ೯:೧೦). ಏಕೆಂದರೆ "ಇಗೋ ನಾನು ಬೇಗನೆ ಬರುತ್ತೇನೆ; ಮತ್ತು ಪ್ರತಿಯೊಬ್ಬನಿಗೂ ಅವನವನ ಕೆಲಸದ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನಲ್ಲಿದೆ" (ಪ್ರಕಟಣೆ ೨೨;೧೨) ಎಂದು ಕರ್ತನು ಹೇಳುತ್ತಿದ್ದಾನೆ. ದೇವರು ಪ್ರೀತಿಸುವವನಾಗಿದ್ದು ನಮ್ಮ ಆಸೆ-ಆಕಾಂಕ್ಷೆಗಳು, ಅವಶ್ಯಕತೆಗಳು, ಕೊರತೆಗಳು ಎಲ್ಲವನ್ನೂ ತನ್ನ ಚಿತ್ತಾನುಸಾರವಾಗಿ ಪೂರೈಸುವನು "ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಅರಿಕೆ ಮಾಡು, ಮತ್ತು ಆತನು ನಿನ್ನ ಮಾರ್ಗಗಳನ್ನು ನಿರ್ದೇಶಿಸುವನು" (ಜ್ಞಾನೋಕ್ತಿಗಳು ೩;೬).
ಪ್ರಿಯ ಸ್ನೇಹಿತರೇ, ನಿಮ್ಮ ಪಾಪಗಳಿಗಾಗಿ ಯಥಾರ್ಥತೆಯಿಂದ ಪಶ್ಚಾತ್ತಾಪ ಪಟ್ಟು, ಕರ್ತನಾದ ಯೇಸು ನಿಮ್ಮ ಎಲ್ಲಾ ಪಾಪಾಪರಾಧಗಳನ್ನು ಹೊತ್ತುಕೊಂಡು ಶಿಲುಬೆಯಲ್ಲಿ ಸತ್ತು, ಹೂಣಲ್ಪಟ್ಟು, ಮರಣವನ್ನು ಜಯಿಸಿ ಮೂರನೇ ದಿನದಲ್ಲಿ ಮೃತ್ಯುಂಜಯನಾಗಿ ಎದ್ದು ಬಂದನೆಂದು ನಿಮ್ಮ ಹೃದಯದಲ್ಲಿ ನಂಬಿದರೆ, ನಿಮ್ಮ ಪಾಪಾಪರಾಧಗಳು ಪರಿಹಾರವಾಗಿ, ನಿಮಗೆ ಆತ್ಮರಕ್ಷಣೆಯಾಗುವುದು. ಆ ಕ್ಷಣದಲ್ಲಿ ನೀವು ದೇವರ ಕುಟುಂಬದಲ್ಲಿ ಹುಟ್ಟುವಿರಿ, "ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಡುವವರಿಗೆ, ದೇವರ ಮಕ್ಕಳಾಗುವ ಅಧಿಕಾರವನ್ನು ಆತನು ಕೊಟ್ಟನು (ಯೋಹಾನ ೧:೧೨).
ದೇವರ ಕುಟುಂಬದಲ್ಲಿ ಹುಟ್ಟಿದ ಮೇಲೆ, ದೇವರ ವಾಕ್ಯದ ಪ್ರಕಾರ ಆತನಲ್ಲಿ ಆತ್ಮಿಕವಾಗಿ ಬೆಳೆಯುತ್ತ, ಅದೇ ರೀತಿಯಲ್ಲಿ ಹುಟ್ಟಿರುವವರ ಸಂಗಡ ಅನ್ಯೋನ್ಯತೆಯಲ್ಲಿರುವುದು ಬಹು ಮಹತ್ವದ್ದಾಗಿದೆ. ಬೈಬಲ್ ನಂಬುವಂತಹ, ಬೈಬಲ್ ಬೋಧಿಸುವ ಕ್ರಮಗಳಿಗನುಸಾರವಾಗಿ ಇರುವ ಚರ್ಚ್ ಸಹವಾಸದಲ್ಲಿ ನಾವಿದ್ದರೆ ಮಾತ್ರ ನಾವು ದೇವರ ಸಾನ್ನಿಧ್ಯ ಹಾಗೂ ಪ್ರಸನ್ನತೆಯನ್ನು ಅನುಭವಿಸುತ್ತ ಆತನಿಗಾಗಿ ಜೀವಿಸಲು ಸಾಧ್ಯ.
ಕರ್ತನು ನಿನ್ನನ್ನು ಪ್ರೀತಿಸುತ್ತಿದ್ದಾನೆನ್ನುವುದು ನಿನ್ನ ನೆನಪಿನಲ್ಲಿರಲಿ!

"ಪ್ರತಿಯೊಂದು ಒಳ್ಳೇವರವು ಮತ್ತು ಪ್ರತಿಯೊಂದು ಪರಿಪೂರ್ಣವರವು ಮೇಲಿನಿಂದಲೇ ಹಾಗೂ ಅವು ಬೆಳಕುಗಳ ತಂದೆಯಿಂದ ಇಳಿದುಬರುತ್ತವೆ, ಆತನಲ್ಲಿ ಚಂಚಲತ್ವವಾಗಲೀ ಹಾಗೂ ವ್ಯತ್ಯಾಸವಾಗಲೀ ಇಲ್ಲ.’
ಯಾಕೋಬನು ೧:೧೭
James 1:27
"ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನು, ವಿಧವೆಯರನ್ನು ಪರಾಂಬರಿಸಿ ತನಗೆ ಲೋಕದ ದೋಷವು ಹತ್ತದಂತೆ ನೋಡಿಕೊಂಡಿರುವುದೇ ತಂದೆಯಾದ ದೇವರ ಸನ್ನಿಧಿಯಲ್ಲಿ ಶುದ್ಧ ಹಾಗೂ ನಿರ್ಮಲ ಧರ್ಮವಾಗಿದೆ."
ಯೋಕೋಬನು ೧:೨೭

ಕಾಮೆಂಟ್‌ಗಳಿಲ್ಲ: