ಬುಧವಾರ, ಸೆಪ್ಟೆಂಬರ್ 21, 2011

ಯೇಸು ಕ್ರಿಸ್ತನು ಯಾರಾಗಿದ್ದಾನೆ?


ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು; ನಮ್ಮ ದುಷ್ಕೃತ್ಯಗಳಿಗೋಸ್ಕರ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನದ ಶಿಕ್ಷೆಯು ಆತನ ಮೇಲಿತ್ತು; ಮತ್ತು ಆತನ ಬಾಸುಂಡೆಗಳಿಂದ ನಾವು ಸ್ವಸ್ಥರಾದೆವು. (ಯೆಶಾಯ ೫೩:೫)
ಆತನು ದೇವರ ಒಬ್ಬನೇ ಮಗನು ಆದಾಗ್ಯೂ ಆತನು ಸ್ವರ್ಗದ ಸಿಂಹಾಸನ ಬಿಟ್ಟು ಸ್ತ್ರೀಯ ಗರ್ಭದಿಂದ ಬಂದನು. ಆತನು ಮನುಷ್ಯಕುಮಾರನಾಗುವುದರ ಮೂಲಕ ನಾವು ದೇವಕುಮಾರರಾದೆವು.
ಆತನು ಪರಿಶುದ್ಧಾತ್ಮನಿಂದ ಗರ್ಭಧರಿಸಿದವನಾಗಿ ಕನ್ಯೆಯಲ್ಲಿ ಜನಿಸಿದನು. ಬಡತನದಲ್ಲಿ ಜೀವಿಸಿದನು, ಐಶ್ವರ್ಯವಾಗಲೀ, ಪ್ರಭಾವವಾಗಲೀ ಇಲ್ಲದ್ದರಿಂದ ಆತನು ನಜರೇತಿನ ಹೊರಗೆ ಗುರುತಿಸಲ್ಪಟ್ಟಿರಲಿಲ್ಲ.
ಆತನು ಸ್ವರ್ಗೀಯ ವಸ್ತ್ರವನ್ನು ತ್ಯಜಿಸಿ ಬಡತನದ ವಸ್ತ್ರವನ್ನು ಧರಿಸಿದನು. ಆತನು ಐಶ್ವರ್ಯವಂತನಾಗಿದ್ದರೂ ನಮಗೋಸ್ಕರ ಬಡವನಾದನು. ಆತನು ಬೇರೆಯವರಿಗೆ ಸೇರಿದ ಸ್ಥಳದಲ್ಲಿ ನಿದ್ರಿಸಿದನು; ಆತನು ಬೇರೆಯವರಿಗೆ ಸೇರಿದ ಕತ್ತೆಯ ಮೇಲೆ ಪ್ರಯಾಣಿಸಿದನು; ಆತನು ಬೇರೊಬ್ಬರ ಸಮಾಧಿಯಲ್ಲಿ ಹೂಣಿಡಲ್ಪಟ್ಟನು.
ಇತಿಹಾಸವು ಯೇಸುಕ್ರಿಸ್ತನಂತಹ ವ್ಯಕ್ತಿಯನ್ನು ಎಂದೆಂದಿಗೂ ತಿಳಿಯಲು ಸಾಧ್ಯವಿಲ್ಲ. ಆತನು ಬಾಲ್ಯದಲ್ಲಿ ಅರಸನಿಗೂ ಮತ್ತು ಆತನನ್ನು ನೋಡಿದವರಿಗೂ ಅತ್ಯಾಶ್ಚರ್ಯ ಪಡುವಂತೆ ಮಾಡಿದನು; ಹುಡುಗನಾಗಿದ್ದಾಗ ದೇವಜ್ಞಾನಿಗಳನ್ನು ತನ್ನ ಬುದ್ಧಿ ಮತ್ತು ಜ್ಞಾನದಿಂದ ಆಶ್ಚರ್ಯಚಕಿತರನ್ನಾಗಿ ಮಾಡಿದನು. ಮನುಷ್ಯನಾಗಿದ್ದಾಗ ಕೆಲ ಸಂದರ್ಭಗಳಲ್ಲಿ ಸೃಷ್ಥಿಯನ್ನು ಸಹ ನಿಯಂತ್ರಿಸಿದನು. ಔಷಧವಿಲ್ಲದೇ ಅನೇಕರನ್ನು ಸ್ವಸ್ಥಮಾಡಿದನು ಹಾಗೂ ಸಣ್ಣ ಹುಡುಗನ ಊಟದಿಂದ ಸಾವಿರಾರು ಜನರಿಗೆ ಊಟಕೊಟ್ಟನು. ದೆವ್ವಗಳೂ ಸಹ ಆತನಿಗೆ ವಿಧೇಯವಾದವು ಮತ್ತು ಆತನು ಸತ್ತವರನ್ನು ಬದುಕಿಸಿದನು.
ಆದಾಗ್ಯೂ ಆತನು ತನ್ನ ದೇಹದಲ್ಲಿ ಹಾಗೂ ಆತ್ಮದಲ್ಲಿ ಪಾಪದಿಂದ ತುಂಬಿರುವ ಮನುಷ್ಯಜನಾಂಗದ ಮೇಲಿನ ದೇವರ ಕೋಪವನ್ನು ಸಹಿಸಿದನು ಮತ್ತು ಅನುಭವಿಸಿದನು. ಆತನು ಮನುಷ್ಯರ ತಿರಸ್ಕಾರಕ್ಕೂ ಹಾಗೂ ನಿಂದನೆಗೂ ಗುರಿಯಾಗಿದ್ದನು. ಆತನು ಅಪರಾಧಿಯಲ್ಲದಿದ್ದರೂ, ಪಿಲಾತನು ಆತನನ್ನು ಅಪರಾಧಿಯೆಂದು ತೀರ್ಮಾನಿಸಿ ಶಿಲುಬೆಯ ಮರಣಕ್ಕೆ ಒಪ್ಪಿಸಿದನು.
ತನ್ನ ಮರಣ ಹಾಗೂ ಯಾತನೆಯ ಮೂಲಕ ಪಾಪಕ್ಕೆ ತೆರಬೇಕಾದ ಸಂಪೂರ್ಣ ಶಿಕ್ಷೆಯನ್ನು ಹೊತ್ತು ಶಿಲುಬೆಯ ಮೇಲೆ ತೀರಿಸಿ, ದೇವರ ಶಾಶ್ವತವಾದ ಶಿಕ್ಷೆ ಮತ್ತು ನ್ಯಾಯತೀರ್ಪುಗಳಿಂದ ತನ್ನಲ್ಲಿ ವಿಶ್ವಾಸವಿಡುವವರೆಲ್ಲರನ್ನೂ ಕ್ಷಮಿಸಿ, ರಕ್ಷಿಸಿ ಸ್ವತಂತ್ರರನ್ನಾಗಿ ಮಾಡುತ್ತಿದ್ದಾನೆ.
ಕೆಲವರು ತಮ್ಮ ಜೀವವನ್ನು ಬೇರೆಯವರಿಗಾಗಿ ಕೊಟ್ಟಿದ್ದಾರೆ ಮತ್ತು ದೊಡ್ಡಮನುಷ್ಯರು ಬಂದಿದ್ದಾರೆ ಮತ್ತು ಹೋಗಿದ್ದಾರೆ. ಆದಾಗ್ಯೂ ಆತನು ಜೀವಿಸುತ್ತಿದ್ದಾನೆ. ಹೆರೋದನು ಆತನನ್ನು ಸಾಯಿಸಲು ಸಾಧ್ಯವಾಗಲಿಲ್ಲ. ಸೈತಾನನು ಆತನನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮರಣವು ಆತನನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ಸಮಾಧಿಗೆ ಆತನನ್ನು ಹಿಡಿದಿಡಲು ಸಾಧ್ಯವಾಗಲಿಲ್ಲ. ಆತನು ದೇವರ ಪರಿಪೂರ್ಣ ನ್ಯಾಯವನ್ನು ಸಂಪೂರ್ಣವಾಗಿ ತೃಪ್ತಿಪಡಿಸಿ, ಮರಣವನ್ನು ಜಯಿಸಿ ತಾನು ತಿಳಿಸಿದಂತೆ ಮೂರನೇ ದಿನದಲ್ಲಿ ಎದ್ದು ಬಂದನು. ಅನಂತರ ತನ್ನ ಶಿಷ್ಯರಿಗೆ ತನ್ನನ್ನು ತೋರ್ಪಡಿಸಿಕೊಂಡು, ಆತನು ಸ್ವರ್ಗಕ್ಕೆ ಏರಿಹೋದನು. ಈಗ ಆತನು ದೇವರ ಸಿಂಹಾಸನದಲ್ಲಿ ಕುಳಿತುಕೊಂಡು ನಮಗಾಗಿ ತಂದೆಯ ಮುಂದೆ ವಿಶ್ವಾಸಿಗಳಿಗಾಗಿ ವಾದಿಸುತ್ತಾ ಎಲ್ಲಾ ವೈರಿಗಳಿಂದಲೂ ವಿಶ್ವಾಸಿಗಳನ್ನು ಸುರಕ್ಷತೆಯಿಂದ ಕಾಪಾಡುತ್ತಾ ಹಾಗೂ ಸಂರಕ್ಷಿಸುತ್ತಾ ತನ್ನ ವರಗಳನ್ನು ಅವರ ಮೇಲೆ ಅನುಗ್ರಹಿಸುತ್ತಿದ್ದಾನೆ.
ಒಂದು ದಿನ ಆತನು ದಯನೀಯ ಸೇವಕನಾಗಿ ಬರದೆ, ಬಲದಿಂದಲೂ ಹಾಗೂ ಮಹಿಮೆಯಿಂದಲೂ ಲೋಕಕ್ಕೆ ನ್ಯಾಯ ತೀರಿಸುವವನಾಗಿ ಬರುವನು. ‌ಆಗ ಪ್ರತಿಯೊಬ್ಬರೂ ಆತನಿಗೆ ಮೊಣಕಾಲೂರುವರು ಮತ್ತು ಪ್ರತಿಯೊಬ್ಬರೂ ಯೇಸುವನ್ನೇ ಕರ್ತನೆಂದು ಅರಿಕೆ ಮಾಡುವರು. ಆತನನ್ನು ನಂಬಿರುವ ವಿಶ್ವಾಸಿಗಳು, ಹರ್ಷದಿಂದಲೂ ಮತ್ತು ಬರವಸೆಯಿಂದಲೂ ಆತನ ಹೆಸರನ್ನು ಅರಿಕೆ ಮಾಡುವರು ಆದರೆ ಆತನ ವೈರಿಗಳು ಭಯ ಭೀತಿಯಿಂದ ಆತನ ಮುಖ ನೋಡಲು ಆಗದೆ ಅಡಗಿಕೊಳ್ಳುವರು.
ಆತನೊಬ್ಬನೇ ಪರಿಪೂರ್ಣನು ಹಾಗೂ ಅತನೊಬ್ಬನೇ ಆತ್ಮಕ್ಕೆ ತೃಪ್ತಿಯನ್ನು ಕೊಡಬಲ್ಲನು. ಈ ದೇವಕುಮಾರನನ್ನು ಹೃದಯದಲ್ಲಿ ನಂಬುವುದರಿಂದ ಪಾಪಪರಿಹಾರವು ಮತ್ತು ಆತ್ಮ ರಕ್ಷಣೆಯು ದೊರೆತು, ದೇವರು ಕ್ರಿಸ್ತನ ಪರಿಪೂರ್ಣ ಸಮಾಧಾನವನ್ನು, ನೀತಿಯನ್ನು ಮತ್ತು ಪರಿಶುದ್ಧತೆಯನ್ನು ಅನುಗ್ರಹಿಸುವನು. ನಂಬುವವರೆಲ್ಲರಿಗೆ ಹಾಗೂ ವಿಶ್ವಾಸವಿಡುವವರೆಲ್ಲರಿಗೆ ದೇವರು ಯೋಹಾನ ೧:೧೨ರಲ್ಲಿ ನೀವು ದೇವರ ಮಕ್ಕಳಾಗುವಿರಿ ಎಂದು ಹೇಳುತ್ತಾನೆ.

ಕಾಮೆಂಟ್‌ಗಳಿಲ್ಲ: