ಸೋಮವಾರ, ಸೆಪ್ಟೆಂಬರ್ 5, 2011

ನಿಜ ಕ್ರೈಸ್ತತ್ವವೆಂದರೆ ಏನು?


ನಿಜ ಕ್ರೈಸ್ತತ್ವ
ಯೇಸು ಕ್ರಿಸ್ತನು ಕೇವಲ ಕ್ರೈಸ್ತರ ದೇವರೆಂದು ಬೈಬಲ್ ಎಲ್ಲಿಯೂ ಹೇಳುವುದಿಲ್ಲ. ಆದರೆ ಯೇಸು ಕ್ರಿಸ್ತನು ಸಮಸ್ತವನ್ನು ಸೃಷ್ಥಿಸಿರುವವನಾಗಿದ್ದು ಸರ್ವಕ್ಕೂ ಕರ್ತನಾದ ದೇವರಾಗಿದ್ದಾನೆ.
• ಮೊದಲನೆಯದಾಗಿ ನಾವು ಯಾವುದು ನಿಜ ಕ್ರೈಸ್ತತ್ವ ಹಾಗೂ ಯಾವುದು ನಿಜ ಕ್ರೈಸ್ತತ್ವವಲ್ಲ ಎಂದು ತಿಳಿಯುವುದು ಅವಶ್ಯವಿದೆ.
• ನಿಜಕ್ರೈಸ್ತತ್ವವು ಅನೇಕರು ನಂಬುವ ಹಾಗೆ ಒಂದು ಮತವಲ್ಲ, ಆದರೆ ನಿಜವಾದ ಅರ್ಥದಲ್ಲಿ ಸತ್ಯ, ಜೀವಿಸುವ ಹಾಗೂ ಪ್ರೀತಿಸುವ ದೇವರೊಂದಿಗೆ ಸಂಬಂಧವನ್ನು ಹೊಂದುವ ಮಾರ್ಗವಾಗಿದೆ.
• ನಿಜಕ್ರೈಸ್ತತ್ವವು ಕಣ್ಣಿಗೆ ಕಾಣುವ ಸಿಕ್ಕಸಿಕ್ಕ ವಸ್ತುಗಳನ್ನು, ವಿಗ್ರಹಗಳನ್ನು, ಪ್ರಾಣಿಗಳನ್ನು, ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳನ್ನು ಅಥವಾ ಗಿಡಮರಗಳನ್ನು ಆರಾಧಿಸುವದಲ್ಲ, ಆದರೆ ಜೀವಿಸುವ ಅದೃಶ್ಯನಾದ ಹಾಗೂ ವೈಯಕ್ತಿಕ ದೇವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವುದಾಗಿದೆ.
• ನಿಜಕ್ರೈಸ್ತತ್ವವು ಯಾವುದೇ ವಿಗ್ರಹವನ್ನು ನಂಬುವುದಲ್ಲ, ಆದರೆ "ಯೇಸುಕ್ರಿಸ್ತನಲ್ಲಿ ಪ್ರತ್ಯಕ್ಷನಾಗಿರುವ ದೇವರನ್ನು ನಂಬುವುದಾಗಿದೆ".
• ನಿಜಕ್ರೈಸ್ತತ್ವವು ಭೂಮಿಯ ಮೇಲೆ ಯಾವುದೇ ವ್ಯಕ್ತಿಯನ್ನು ತಂದೆಯೆಂದು ಕರೆಯುವುದಲ್ಲ, ಆದರೆ ರಕ್ಷಕನಾಗಿರುವ ದೇವರನ್ನೇ ನಮ್ಮ ತಂದೆಯೆಂದು ಅರಿಕೆ ಮಾಡುವುದಾಗಿದೆ.
• ನಿಜಕ್ರೈಸ್ತತ್ವವು ಚರ್ಚ್ ಕಟ್ಟಡವಲ್ಲ, ಬದಲಾಗಿ ಬೈಬಲ್ಲಿನಲ್ಲಿ ಹಾಗೂ ಅದು ಕಲಿಸುವ ಎಲ್ಲಾ ಸತ್ಯಗಳಲ್ಲಿ ವಿಶ್ವಾಸವಿಟ್ಟಂತಹ ವಿಶ್ವಾಸಿಗಳು ಒಂದಾಗಿ ಸೇರಿ ಅದೃಶ್ಯನೂ, ಶಾಶ್ವತನೂ, ಇರುವಾತನೂ ಮತ್ತು ವೈಯಕ್ತಿಕ ದೇವರೂ ಆಗಿರುವಾತನನ್ನು ಆರಾಧಿಸುತ್ತ, ದೇವರ ಹಾಗೂ ಪರಸ್ಪರ ಅನ್ಯೋನ್ಯತೆಯಲ್ಲಿರುವುದಾಗಿದೆ.
• ನಿಜಕ್ರೈಸ್ತತ್ವವು ಶಿಲುಬೆಯನ್ನು ಹಾಕಿಕೊಳ್ಳುವುದಾಗಲೀ ಅಥವಾ ಶಿಲುಬೆಯ ಆಕಾರದಲ್ಲಿ ಏನಾದರೂ ಗುರುತನ್ನು ಮಾಡುವುದಾಗಲೀ ಅಲ್ಲವೇ ಅಲ್ಲ, ಆದರೆ ಅಂತಹದಾವುದನ್ನೂ ಮಾಡದೆ ಇರುವುದಾಗಿದೆ.
• ನಿಜಕ್ರೈಸ್ತತ್ವವು ಯಾವುದೇ ಮನುಷ್ಯನನ್ನು ತನ್ನ ಗುರುವಾಗಿ ಹೊಂದುವುದಲ್ಲ, ಆದರೆ ಕರ್ತನಾಗಿರುವ ಯೇಸುಕ್ರಿಸ್ತನನ್ನೇ ತನ್ನ ಗುರುವನ್ನಾಗಿ ಹಾಗೂ ಶಿರಸ್ಸನ್ನಾಗಿ ಹೊಂದಿದೆ.
• ನಿಜಕ್ರೈಸ್ತತ್ವವು ಯಾವುದೇ ಮನುಷ್ಯನ ಹುಟ್ಟುವಿಕೆಯಲ್ಲಿ ಆರಂಭವಾಗುವುದಿಲ್ಲ, ಆದರೆ ಯೇಸುಕ್ರಿಸ್ತನಲ್ಲಿ ಹಾಗೂ ಆತನ ಮೂಲಕ, ಆತ್ಮಿಕವಾಗಿ ಹೊಸದಾಗಿ ಹುಟ್ಟುವುದರಿಂದ ಪ್ರಾರಂಭವಾಗುತ್ತದೆ.
• ನಿಜಕ್ರೈಸ್ತತ್ವವು ಈ ಲೋಕದ ಪ್ರತಿಯೊಬ್ಬ ಮನುಷ್ಯನೂ ಪಾಪಿಯೆಂದು ಅರ್ಥ ಮಾಡಿಕೊಂಡು, ಪಾಪ ಪರಿಹಾರಕ್ಕಾಗಿ ಮತ್ತು ಆತ್ಮರಕ್ಷಣೆಗಾಗಿ ಕರ್ತನಾದ ಯೇಸುಕ್ರಿಸ್ತನನ್ನು ಹೃದಯದಲ್ಲಿ ಸ್ವೀಕರಿಸಿ, ಬಾಯಿಯಿಂದ ಯೇಸುವನ್ನೇ ಕರ್ತನೆಂದು ಅರಿಕೆ ಮಾಡುವುದಾಗಿದೆ. (ರೋಮಾಪುರದವರಿಗೆ ೧೦:೯-೧೦).
• ನಿಜಕ್ರೈಸ್ತತ್ವವು ದೇವರು ಮನುಷ್ಯನನ್ನು ತನ್ನ ಮಹಿಮೆಗಾಗಿ ಹಾಗೂ ಸಹವಾಸಕ್ಕಾಗಿ, ಉಂಟುಮಾಡಿದ್ದಾನೆಂದು ತಿಳಿದು ದೇವರ ಅನ್ಯೋನ್ಯತೆಯನ್ನು ಕರ್ತನಾಗಿರುವ ಯೇಸುಕ್ರಿಸ್ತನಲ್ಲಿ ಹೊಂದಿಕೊಳ್ಳುವುದಾಗಿದೆ.
• ನಿಜಕ್ರೈಸ್ತತ್ವವು ಯಾವುದೇ ವಸ್ತುವಿನಲ್ಲಾಗಲೀ, ವಿಗ್ರಹದಲ್ಲಾಗಲೀ, ವ್ಯಕ್ತಿಯಲ್ಲಾಗಲೀ, ಪ್ರಾಣಿಯಲ್ಲಾಗಲೀ, ಗಿಡ-ಮರಗಳಲ್ಲಾಗಲೀ ಅಥವಾ ಮುಂತಾದ ಯಾವುದೇ ರೂಪಗಳಲ್ಲಾಗಲೀ ನಂಬಿಕೆಯಿಡುವುದಿಲ್ಲ ಆದರೆ ಅದೃಶ್ಯನಾಗಿರುವ, ಜೀವಿಸುವ, ವೈಯಕ್ತಿಕ, ಪ್ರೀತಿಸುವ, ಪಾಲಿಸುವ ಹಾಗೂ ಪೋಷಿಸುವ ದೇವರಲ್ಲಿ ನಂಬಿಕೆ ಹಾಗೂ ಭರವಸೆಯನ್ನಿಡುವುದು.