ಶನಿವಾರ, ಆಗಸ್ಟ್ 6, 2011

ದೇವರ ಇರುವಿಕೆಯನ್ನು ಗ್ರಹಿಸುವುದು



ದೇವರು ಜೀವಿಸುವವನು ಹಾಗೂ ಅದೃಶ್ಯನು
ಬೈಬಲ್, ದೇವರು ಆತ್ಮನಾಗಿದ್ದಾನೆಂದು ಸ್ಪಷ್ಟವಾಗಿ ಪ್ರಕಟಿಸುತ್ತದೆ. ಆತನು ಆತ್ಮನಾಗಿದ್ದಾನೆ. ವೈಯಕ್ತಿಕವಾಗಿರುವವನು ಹಾಗೂ ಶಾಶ್ವತವಾಗಿರುವವನು (ಯೋಹಾನ ೪:೨೪). ಧರ್ಮೋಪದೇಶಕಾಂಡ ೬ : ೪ ರಲ್ಲಿ ತಿಳಿಸಿರುವಂತೆ ಆತನು ಒಬ್ಬನೇ - ಆತನ ವ್ಯಕ್ತಿತ್ವವನ್ನು ವಿಭಾಗಿಸಲಾಗಲೀ, ಬೇರ್ಪಡಿಸುವುದಾಗಲೀ ಹಾಗೂ ಪ್ರತ್ಯೇಕ ಭಾಗಗಳನ್ನಾಗಿ ಮಾಡಲು ಸಾಧ್ಯವಿಲ್ಲ. ದೇವರು ತ್ರಯೇಕ ದೇವರಾಗಿದ್ದಾನೆ - ಶಾಶ್ವತವಾಗಿ ಮೂವರು ಸರ್ವ ಸಂಗತಿಗಳಲ್ಲಿ ಸರಿಸಮನಾಗಿದ್ದಾರೆ (ಮತ್ತಾಯ ೨೮ : ೧೯; ೨ಕೊರಿಂಥ ೧೩ : ೧೪). ದೇವರ ವ್ಯಕ್ತಿತ್ವವನ್ನು ಗ್ರಹಿಸಲು ಬಹಳಷ್ಟು ಕುತೂಹಲ ಹಾಗೂ ದೊಡ್ಡಪ್ರಯತ್ನ ನಡೆಯುತ್ತಿದ್ದರೂ ಸಹ ದೇವರು ಬಹಳ ಅತ್ಯುನ್ನತನಾಗಿದ್ದಾನೆ.
ದೇವರ ವ್ಯಕ್ತಿತ್ವ, ಆತನ ಪ್ರಭಾವ ಹಾಗೂ ಗುಣಲಕ್ಷಣಗಳು ಹಾಗೂ ನಮ್ಮೊಂದಿಗೆ ದೇವರು ವರ್ತಿಸುವ ರೀತಿಯನ್ನರಿಯಲು ಕೇವಲ ನಾವು ಉಪಯೋಗಿಸುವ ಪದಗಳು ಅಥವಾ ಶಬ್ದಗಳಿಂದ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿದೆ. ಏಕೆಂದರೆ ಆತನು ಅಷ್ಟೊಂದು ಉನ್ನತೋನ್ನತನೂ, ಮಹೋನ್ನತನೂ ಆಗಿದ್ದಾನೆ. ದೇವರು ಸರ್ವಶಕ್ತನೂ, ಸರ್ವ ಜ್ನಾನಿಯೂ, ಸರ್ವವ್ಯಾಪಿಯೂ, ಪ್ರೀತಿಸ್ವರೂಪನೂ, ಪರಿಶುದ್ಧನೂ, ನೀತಿವಂತನೂ, ನ್ಯಾಯವಂತನೂ, ಶಾಶ್ವತನೂ, ಕರುಣಾಳುವೂ, ಕೃಪಾಳುವೂ, ದಯಾಳುವೂ, ಒಳ್ಳೆಯವನೂ, ಅಪರಿಮಿತನೂ, ಅದೃಶ್ಯನೂ, ಮುಂತಾದ್ದು. ದೇವರು ನಾವು ಆತನನ್ನು ಸರಿಯಾಗಿ ತಿಳಿಯಬೇಕೆಂದು ತನ್ನ ವಾಕ್ಯ (ಬೈಬಲ್) ವನ್ನು ನಮಗೆ ಪ್ರೀತಿಯಿಂದ ಅನುಗ್ರಹಿಸಿದ್ದಾನೆ. ನಾವು ಸರಿಯಾಗಿ ದೇವರನ್ನು ತಿಳಿಯಲು ಹಾಗೂ ಗ್ರಹಿಸಲು ಬೈಬಲ್ ಒಂದರಿಂದ ಮಾತ್ರವೇ ಸಾಧ್ಯವೆನ್ನುವ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಮೊದಲನೆಯದಾಗಿ,ದೇವರು ತನ್ನನ್ನು "ತಂದೆಯೆಂಬುದಾಗಿ" ಮನುಷ್ಯರಿಗೆ ಪ್ರಕಟಿಸಿಕೊಂಡಿದ್ದಾನೆ. ಏಕೆಂದರೆ ತಾನು ವೈಯಕ್ತಿಕ ಸಂಬಂಧವನ್ನು ಮಾನವರೊಂದಿಗೆ ಹೊಂದಲು ಆಶಿಸುತ್ತಿರುವೆನೆಂದು ತಿಳಿಸಲು. ತಾನು ಸೃಷ್ಟಿಕರ್ತನು, ಕ್ರಿಸ್ತನ ತಂದೆಯೆಂದು ಹೇಳುವಾಗ, ಆದು ಆತನು ಶಾಶ್ವತನು ಹಾಗೂ ವಿಶಿಷ್ಟವಾದ ಸಂಬಂಧವನ್ನು ತನ್ನನ್ನು ನಂಬುವವರೊಂದಿಗೆ ಹೊಂದಲು ಬಯಸುವವನೆಂಬುದಾಗಿ ಕೃಪೆಯಿಂದ ತಿಳಿಸುತ್ತಿದ್ದಾನೆ. ಇಸ್ರಾಯೇಲಿನ ತಂದೆಯೆಂದು ಹೇಳುವಾಗ, ಇಸ್ರಾಯೇಲಿನೊಂದಿಗೆ ಸ್ಥಾಪಿತವಾದ ಒಡಂಬಡಿಕೆಯ ಮೂಲಕ ಆತನು ಅವರಿಗೆ ತಂದೆಯೆಂದು ತಿಳಿಸಿದ್ದಾನೆ.
ಯೇಸು ಕ್ರಿಸ್ತನಿಗೆ "ದೇವರ ಮಗನು" ಎನ್ನುವ ಬಿರುದಿದೆ. ಹಲವಾರು ಸಂದರ್ಭಗಳಲ್ಲಿ ಜನರು ಯೇಸುವನ್ನು ನೀನು ದೇವರ ಮಗನು, ಕ್ರಿಸ್ತನು ಎಂದು ಅರಿಕೆ ಮಾಡಿದಾಗ,ಅದು ತನ್ನ ದೇವತ್ವದ ಕುರುಹೆಂದು, ಯೇಸು ಅದನ್ನು ಸ್ವೀಕರಿಸಿದನು (ಯೋಹಾನ ೧೦:೨೪-೩೮). ಯೇಸು ಸಹ ಹಲವಾರು ಬಾರಿ ತನ್ನನ್ನು"ಮಗನು" ಎಂಬುದಾಗಿ ತಿಳಿಸುತ್ತಾನೆ. ದೇವರ ಮಗುವಿಗೆ ಈ ಹೆಸರು ಬಹಳ ಮುಖ್ಯವಾಗಿದೆ. ಏಕೆಂದರೆ ಕ್ರಿಸ್ತನು ದೇವರಾಗಿರುವುದರಿಂದ ಆತನು ಹೇಳಿದ್ದೆಲ್ಲವೂ ಹಾಗೂ ಆತನು ಮಾಡಿದೆಲ್ಲಾ ಕಾರ್ಯಗಳೂ ಇದಕ್ಕೆ ಸಾಕ್ಷಿ ಕೊಡುವುದರಿಂದ ಕ್ರಿಸ್ತನ ಕುರಿತಾದ ಅನೇಕ ಮುಖ್ಯ ಸತ್ಯಗಳನ್ನು ಸ್ಥಾಪಿಸಲು ಸಹಾಯ ಪಡಿಸುತ್ತದೆ. ಇಂತಹ ಕ್ರಿಸ್ತನೊಂದಿಗಿನ ನಮ್ಮ ಸಂಬಂಧ ನಾವು ಯಾರು (ಸೈತಾನನ ಮಕ್ಕಳೋ ಅಥವಾ ದೇವರ ಮಕ್ಕಳೋ (ಯೋಹಾನ ೧:೧೨-೧೩) ) ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ದೇವರಾತ್ಮನೊಂದಿಗಿನ ನಮ್ಮ ಸಂಬಂಧ ಹಾಗೂ ಅನ್ಯೋನ್ಯತೆ ನಾವು ಎಂತಹ ವಿಶ್ವಾಸಿಗಳೆನ್ನುವುದನ್ನು ಸ್ಪಷ್ಟಪಡಿಸುತ್ತದೆ.

ದೇವರ ಮಗುವಾಗುವುದೇ ಹೊಸ ಜೀವನದ ಆರಂಭ
ಮನುಷ್ಯ ಸಂಕುಲವು ಸ್ವಭಾವ ಸಿದ್ಧವಾಗಿ ಪಾಪಮಯವಾಗಿದೆ ಮತ್ತು ದೇವರೊಂದಿಗೆ ಸಂಬಂಧ ಹೊಂದಲು ದೇವರ ನೀತಿಯ ಅತ್ಯವಶ್ಯಕತೆಯಿದೆ. ನಾವು ದೇವರನ್ನು ಸಂಪರ್ಕಿಸಬೇಕಾದರೆ, ಪಾಪದಿಂದ ಪ್ರತ್ಯೇಕಿಸಲ್ಪಡಬೇಕು ಹಾಗೂ ದೇವರ-ನೀತಿಗೋಸ್ಕರ ಪ್ರತ್ಯೇಕಿಸಲ್ಪಡಬೇಕು. ದೇವರ ನಿಯಮಗಳಿಗೆ ಬದ್ಧರಾಗಲೇಬೇಕು--ನಮ್ಮೆಲ್ಲ ಪಾಪಗಳಿಂದ ಬಿಡುಗಡೆ, ಕ್ಷಮಾಪಣೆಯನ್ನು ಹೊಂದಿಕೊಂಡು, ಪಾಪಗಳಿಂದ ತೊಳೆಯಲ್ಪಟ್ಟು ದೈಹಿಕವಾಗಿ, ಆತ್ಮಿಕವಾಗಿ, ಮಾನಸಿಕವಾಗಿ ಶುದ್ಧೀಕರಸಲ್ಪಡಬೇಕು.
ದೇವರಲ್ಲಿ ಹೊಸಜೀವನವನ್ನು ಹೊಂದಿಕೊಳ್ಳಬೇಕೆಂದು ಗ್ರಹಿಸುವುದು ಒಂದು ಸಂಗತಿಯಾದರೆ, ಅದನ್ನು ಹೊಂದಿಕೊಳ್ಳಲು ಮಾಡಬೇಕಾದುದನ್ನು ಮಾಡುವುದು ಸಂಪೂರ್ಣವಾಗಿ ಇನ್ನೊಂದು ಸಂಗತಿಯಾಗಿದೆ.
ಕರ್ತನಾದ ಯೇಸುಕ್ರಿಸ್ತನು ನನಗೋಸ್ಕರ ಶಿಲುಬೆಯಲ್ಲಿ ನನ್ನೆಲ್ಲ ಪಾಪಗಳನ್ನು ಹೊತ್ತುಕೊಂಡು ಸತ್ತು, ಹೂಣಲ್ಪಟ್ಟು, ಮರಣದಿಂದ ಎದ್ದು ಬಂದಿದ್ದಾನೆಂದು ಹೃದಯದಲ್ಲಿ ನಂಬಿ, ಬಾಯಿಯಿಂದ ಯೇಸುವನ್ನೇ ಕರ್ತನೆಂದು ಅರಿಕೆ ಮಾಡಿದರೆ ಪಾಪಪರಿಹಾರವಾಗಿ, ಆತ್ಮರಕ್ಷಣೆಯಾಗುವುದು” (ರೋಮಾಪುರದವರಿಗೆ ೧೦:೯-೧೦; ಯೋಹಾನ ೧:೧೨-೧೩).
ದೇವರು ನಮ್ಮನ್ನು ಪಾಪದಿಂದ ಬಿಡಿಸುವುದೇ ನಾವು ದೇವರಲ್ಲಿ-ದೇವರಿಗಾಗಿ - ದೇವರಿಗೋಸ್ಕರ ಪರಿಶುದ್ಧರಾಗಿ ಜೀವಿಸಬೇಕೆಂಬುದಾಗಿ. ಕ್ರಿಸ್ತನಲ್ಲಿ ನಂಬಿಕೆಯಿಡುವವರು, ಮರಣದಿಂದ ಪಾರಾಗಿ ನಿತ್ಯಜೀವಕ್ಕೆ ಸೇರಿದವರಾಗಿದ್ದಾರೆ (ಯೋಹಾನ ೫:೨೪).
ರಕ್ಷಣೆ ಹೊಂದಿರುವವರೆಲ್ಲರೂ ದೇವರಲ್ಲಿ ಹೊಸ ಸೃಷ್ಟಿಗಳಾಗಿದ್ದಾರೆ. ( ಎಫೆಸದವರಿಗೆ ೨:೧೦; ೨ ಕೊರಿಂಥ ೫:೧೭) ಕತ್ತಲೆಯ ಕೃತ್ಯಗಳಿಂದ ಬಿಡಿಸಲ್ಪಟ್ಟು ದೇವರ ಮಗನ ರಾಜ್ಯಕ್ಕೆ ಅಂದರೆ ಬೆಳಕಿಗೆ ಸೇರಿದ್ದಾರೆ (ಕೊಲೋಸ್ಸೆಯವರಿಗೆ ೧:೧೩).
ಯೋಹಾನನ ಸುವಾರ್ತೆ ೩ನೆಯ ಅಧ್ಯಾಯದಲ್ಲಿ ಹೊಸದಾಗಿ ಹುಟ್ಟುವುದು ಎಂದರೆ ದೇವರ ಕುಟುಂಬದಲ್ಲಿ ಹುಟ್ಟುವುದು. ನಾವೀಗಾಗಲೇ ಒಂದು ಸಾರಿ ದೈಹಿಕವಾಗಿ ಹುಟ್ಟಿದ್ದೇವೆ, ಹಾಗೂ ಆತ್ಮಿಕವಾಗಿ ಹುಟ್ಟಿದರೆ ಮಾತ್ರ ನಮಗೂ ದೇವರಿಗೂ ಸಂಬಂಧ ವಿರುವುದು ಮತ್ತು ನಾವು ಇಹಲೋಕದ ಪ್ರಯಾಣದ ನಂತರ ಶಾಶ್ವತವಾಗಿ ದೇವರೊಂದಿಗೆ ಸ್ವರ್ಗದಲ್ಲಿ ಜೀವಿಸುವೆವು ಇಲ್ಲವಾದಲ್ಲಿ ಶಾಶ್ವತವಾಗಿ ನರಕದಲ್ಲಿ ದುಷ್ಟ ಶಕ್ತಿಗಳು ಹಾಗೂ ದುಷ್ಟ ವ್ಯಕ್ತಿಗಳೊಂದಿಗೆ ಇರಬೇಕಾಗುವುದು".
ಕ್ರಿಸ್ತನಲ್ಲಿ ಹೊಸಜೀವನವನ್ನು ಕಂಡುಕೊಳ್ಳುವುದು ಒಂದು ರೋಮಾಂಚನಕಾರಿಯಾದ ಸಂಗತಿಯೇ ಹೌದು. ಕ್ರಿಸ್ತನೊಬ್ಬನೇ ಪಾಪಿಗಳ ರಕ್ಷಕನು ಮತ್ತು ನಿತ್ಯಜೀವ ಕೊದುವವನು (೧ತಿಮೊಥಿ ೧:೧೫). ನಾವು ದೇವರೊಂದಿಗೆ ಹೊಸದಾದ ಹಾಗೂ ವೈಯಕ್ತಿಕವಾದ ಸಂಬಂಧದಲ್ಲಿ ಜೀವಿಸುವಾಗ ಅದು ನಮ್ಮ ಜೀವನಕ್ಕೆ ಅರ್ಥ, ಉದ್ದೇಶ ಹಾಗೂ ಸಾರ್ಥಕತೆಯನ್ನು ತರುವುದು. ಇಲ್ಲವಾದಲ್ಲಿ ಪ್ರಾಣಿಗಳ ಹಾಗೆ ವ್ಯರ್ಥವಾದ ಜೀವಿತವಾಗುವುದು. ಈ ಹೊಸ ಜೀವನವು ದೇವರ ಕೊಡುಗೆಯಾಗಿದ್ದು ಎಂದಿಗೂ ನಾಶವಾಗುವುದಿಲ್ಲ. ಕರ್ತನಾದ ಯೇಸು ಕ್ರಿಸ್ತನಲ್ಲಿ ನಿಜವಾದ-ವಿಶ್ವಾಸವಿಡುವಂಥ ಪ್ರತಿಯೊಬ್ಬರನ್ನೂ ಸಂಪೂರ್ಣವಾಗಿ ಬದಲಾವಣೆಯ, ಆಶೀರ್ವದಿಸಲ್ಪಟ್ಟ ಜೀವಿತಕ್ಕೆ ದೇವರು ಮಾರ್ಪಡಿಸುತ್ತಾನೆ. ಹಲ್ಲೆಲೂಯ, ಆಮೆನ್.

ಹೊಸ ಜೀವನದಲ್ಲಿ ದೇವರೊಡನೆ ಬೆಳೆಯುವುದು
ಹೊಸಜೀವನದಲ್ಲಿ ನಾನು ಹೇಗೆ ಬೆಳೆಯಬೇಕೆಂದು ತಿಳಿಯುವುದು ಬಹಳ ಮುಖ್ಯವಾದುದು. ಹೀಗೆಂದು ಒಬ್ಬ ಭಕ್ತರು ಹೇಳಿದ್ದಾರೆ. ಪಾಪವು ನಿನ್ನನ್ನು ಬೈಬಲ್ ನಿಂದ ದೂರವಿಡುತ್ತದೆ ಅಥವಾ ಬೈಬಲ್ ನಿನ್ನನ್ನು ಪಾಪದಿಂದ ದೂರವಿಡುತ್ತದೆ. ಈಗಾಗಲೇ ಪಾಪದಿಂದ ಬಿಡುಗಡೆಯಾಗಿ ಹೊಸ ಜೀವನವನ್ನು ಹೊಂದಿಕೊಂಡ ಮೇಲೆ ಮಾಡಬೇಕಾದ ಮೊಟ್ಟ ಮೊದಲನೆಯ ಸಂಗತಿಯೆಂದರೆ ಆತ್ಮೀಕವಾಗಿ ದೇವರ ಮಗುವಾದ ಮೇಲೆ ದೇವರೊಂದಿಗೆ ಮಾತನಾಡುವುದು ಬಹು ಮುಖ್ಯವಾದ ಸಂಗತಿ. ನಾವು ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತನಾಡುತ್ತೇವೆ - ಅಂದರೆ ನಾವು ಆತನ ವ್ಯಕ್ತಿತ್ವವನ್ನು ಸ್ತುತಿಸುತ್ತೇವೆ, ಆರಾಧಿಸುತ್ತೇವೆ, ನಮ್ಮ ಸಮಸ್ಯೆಗಳನ್ನು ಅರ್ಪಿಸುತ್ತೇವೆ ಹಾಗೂ ದೇವರು ನಮ್ಮೊಂದಿಗೆ ತನ್ನ ವಾಕ್ಯದ ಮೂಲಕ ಮಾತನಾಡುವುದನ್ನು ನಾವು ಕೇಳಿಸಿಕೊಂಡು ಅದರ ಹಾಗೆಯೇ ಜೀವಿಸುತ್ತೇವೆ.
ಕ್ರಮಬದ್ಧವಾದ ಪ್ರಾರ್ಥನೆ - ಜೀವಿತವಿಲ್ಲದೆ ನಾವು ಆತ್ಮೀಕವಾಗಿ ಪ್ರಬುದ್ಧರಾಗಲು ಸಾಧ್ಯವಿಲ್ಲ.
ಕ್ರಿಸ್ತನಲ್ಲಿ ನಂಬಿಕೆ ಇಟ್ಟಿರುವ ಸಹ ವಿಶ್ವಾಸಿಗಳೊಡನೆ ಸೇರಿಕೊಂಡು ಕರ್ತನ ಆರಾಧನೆಯಲ್ಲಿ ಮತ್ತು ಅನ್ಯೋನ್ಯತೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಮುಖ್ಯವಾದ ಮತ್ತೊಂದು ವಿಷಯವಾಗಿದೆ. ಸಹ ವಿಶ್ವಾಸಿಗಳೊಂದಿಗಿನ ಅನ್ಯೋನ್ಯತೆ, ಆತ್ಮೀಕ ಜೀವನದಲ್ಲಿ ನಾವು ದೇವರಲ್ಲಿ ಜೀವಿಸಲು ಸಹಾಯಿಸುತ್ತದೆ. ಕರ್ತನ ವಾಕ್ಯಗಳನ್ನು ಕೈಕೊಂಡು ನಡೆಯುವುದು (ವಿಧೇಯತೆ) ನಮ್ಮನ್ನು ಆತನಿಗೆ ಬಹು ಹತ್ತಿರದವರನ್ನಾಗಿಸುತ್ತದೆ. ಕರ್ತನಾದ ಯೇಸು ಕ್ರಿಸ್ತನ ಅಧಿಪತ್ಯಕ್ಕೆ ಎಷ್ಟರ ಮಟ್ಟಿಗೆ ನಮ್ಮನ್ನು ಒಪ್ಪಿಸಿಕೊಟ್ಟು ಜೀವಿಸುವೆವೋ ಅಷ್ಟರ-ಮಟ್ಟಿಗೆ, ನಮ್ಮ ಜೀವಿತಗಳು ಫಲಭರಿತ ಜೀವನಗಳಾಗಿರುತ್ತವೆ.
ದೇವರ ವಾಕ್ಯವು ಕ್ರಿಸ್ತೀಯ ಜೀವಿತವನ್ನು ದೇವರಾತ್ಮನಲ್ಲಿ ಜೀವಿಸುವ ಜೀವಿತ ಎಂಬುದಾಗಿ ತಿಳಿಸುತ್ತದೆ. ದೇವರಾತ್ಮನಿಗೆ ನಮ್ಮನ್ನು ಒಪ್ಪಿಸಿಕೊಡುತ್ತಾ ದಿನದಿಂದ - ದಿನಕ್ಕೆ, ವಿಧೇಯತೆಯಲ್ಲಿ, ಅನ್ಯೋನ್ಯತೆಯಲ್ಲಿ ಜೀವಿಸಬೇಕು. ಇಲ್ಲವಾದರೆ ನಾವು ಪಾಪ ಮಾಡುತ್ತ ಸಂಕಟ ಪಡುತ್ತೇವೆ. ನಾವು ದೇವರಾತ್ಮನಿಗೆ ವಿಧೇಯರಾದಷ್ಟೂ ನಮ್ಮ ಜೀವಿತಗಳು ದೇವರ ಸ್ವಬಾವದಿಂದ ಕಂಗೊಳಿಸುತ್ತವೆ. ಗಲಾತ್ಯದವರಿಗೆ ೫:೨೨ರಲ್ಲಿ ಆ ಫಲಗಳನ್ನು ಕಾಣಬಹುದು. ದೇವರಲ್ಲಿ ಜೀವಿಸುವುದು ಎಂದರೆ ದೇವರಾತ್ಮನಿಗೆ, ವಾಕ್ಯಕ್ಕೆ ವಿಧೇಯರಾಗಿದ್ದು, ನಮ್ಮನ್ನು ಪ್ರತಿದಿನ ದೇವರಿಗೆ ಸಮರ್ಪಿಸಿಕೊಳ್ಳುತ್ತಾ, ದೇವರಿಂದ ಹಾಗೂ ಆತನ ವಾಕ್ಯದಿಂದ ತುಂಬಲ್ಪಟ್ಟು ಜೀವಿಸುವುದು. ಹಲ್ಲೆಲೂಯ, ಆಮೆನ್.