ಮಂಗಳವಾರ, ಸೆಪ್ಟೆಂಬರ್ 27, 2011

ಹೊಸ ಜೀವನದಲ್ಲಿ ದೇವರೊಡನೆ ಬೆಳೆಯುವುದು



ಹೊಸಜೀವನದಲ್ಲಿ ನಾನು ಹೇಗೆ ಬೆಳೆಯಬೇಕೆಂದು ತಿಳಿಯುವುದು ಬಹಳ ಮುಖ್ಯವಾದುದು. ಹೀಗೆಂದು ಒಬ್ಬ ಭಕ್ತರು ಹೇಳಿದ್ದಾರೆ. ಪಾಪವು ನಿನ್ನನ್ನು ಬೈಬಲ್ ನಿಂದ ದೂರವಿಡುತ್ತದೆ ಅಥವಾ ಬೈಬಲ್ ನಿನ್ನನ್ನು ಪಾಪದಿಂದ ದೂರವಿಡುತ್ತದೆ. ಈಗಾಗಲೇ ಪಾಪದಿಂದ ಬಿಡುಗಡೆಯಾಗಿ ಹೊಸ ಜೀವನವನ್ನು ಹೊಂದಿಕೊಂಡ ಮೇಲೆ ಮಾಡಬೇಕಾದ ಮೊಟ್ಟ ಮೊದಲನೆಯ ಸಂಗತಿಯೆಂದರೆ ಆತ್ಮೀಕವಾಗಿ ದೇವರ ಮಗುವಾದ ಮೇಲೆ ದೇವರೊಂದಿಗೆ ಮಾತನಾಡುವುದು ಬಹು ಮುಖ್ಯವಾದ ಸಂಗತಿ. ನಾವು ಪ್ರಾರ್ಥನೆಯಲ್ಲಿ ದೇವರೊಂದಿಗೆ ಮಾತನಾಡುತ್ತೇವೆ - ಅಂದರೆ ನಾವು ಆತನ ವ್ಯಕ್ತಿತ್ವವನ್ನು ಸ್ತುತಿಸುತ್ತೇವೆ, ಆರಾಧಿಸುತ್ತೇವೆ, ನಮ್ಮ ಸಮಸ್ಯೆಗಳನ್ನು ಅರ್ಪಿಸುತ್ತೇವೆ ಹಾಗೂ ದೇವರು ನಮ್ಮೊಂದಿಗೆ ತನ್ನ ವಾಕ್ಯದ ಮೂಲಕ ಮಾತನಾಡುವುದನ್ನು ನಾವು ಕೇಳಿಸಿಕೊಂಡು ಅದರ ಹಾಗೆಯೇ ಜೀವಿಸುತ್ತೇವೆ.
ಕ್ರಮಬದ್ಧವಾದ ಪ್ರಾರ್ಥನೆ - ಜೀವಿತವಿಲ್ಲದೆ ನಾವು ಆತ್ಮೀಕವಾಗಿ ಪ್ರಬುದ್ಧರಾಗಲು ಸಾಧ್ಯವಿಲ್ಲ.
ಕ್ರಿಸ್ತನಲ್ಲಿ ನಂಬಿಕೆ ಇಟ್ಟಿರುವ ಸಹ ವಿಶ್ವಾಸಿಗಳೊಡನೆ ಸೇರಿಕೊಂಡು ಕರ್ತನ ಆರಾಧನೆಯಲ್ಲಿ ಮತ್ತು ಅನ್ಯೋನ್ಯತೆಯಲ್ಲಿ ಪಾಲ್ಗೊಳ್ಳುವುದು ಅತ್ಯಂತ ಮುಖ್ಯವಾದ ಮತ್ತೊಂದು ವಿಷಯವಾಗಿದೆ. ಸಹ ವಿಶ್ವಾಸಿಗಳೊಂದಿಗಿನ ಅನ್ಯೋನ್ಯತೆ, ಆತ್ಮೀಕ ಜೀವನದಲ್ಲಿ ನಾವು ದೇವರಲ್ಲಿ ಜೀವಿಸಲು ಸಹಾಯಿಸುತ್ತದೆ. ಕರ್ತನ ವಾಕ್ಯಗಳನ್ನು ಕೈಕೊಂಡು ನಡೆಯುವುದು (ವಿಧೇಯತೆ) ನಮ್ಮನ್ನು ಆತನಿಗೆ ಬಹು ಹತ್ತಿರದವರನ್ನಾಗಿಸುತ್ತದೆ. ಕರ್ತನಾದ ಯೇಸು ಕ್ರಿಸ್ತನ ಅಧಿಪತ್ಯಕ್ಕೆ ಎಷ್ಟರ ಮಟ್ಟಿಗೆ ನಮ್ಮನ್ನು ಒಪ್ಪಿಸಿಕೊಟ್ಟು ಜೀವಿಸುವೆವೋ ಅಷ್ಟರ-ಮಟ್ಟಿಗೆ, ನಮ್ಮ ಜೀವಿತಗಳು ಫಲಭರಿತ ಜೀವನಗಳಾಗಿರುತ್ತವೆ.
ದೇವರ ವಾಕ್ಯವು ಕ್ರಿಸ್ತೀಯ ಜೀವಿತವನ್ನು ದೇವರಾತ್ಮನಲ್ಲಿ ಜೀವಿಸುವ ಜೀವಿತ ಎಂಬುದಾಗಿ ತಿಳಿಸುತ್ತದೆ. ದೇವರಾತ್ಮನಿಗೆ ನಮ್ಮನ್ನು ಒಪ್ಪಿಸಿಕೊಡುತ್ತಾ ದಿನದಿಂದ - ದಿನಕ್ಕೆ, ವಿಧೇಯತೆಯಲ್ಲಿ, ಅನ್ಯೋನ್ಯತೆಯಲ್ಲಿ ಜೀವಿಸಬೇಕು. ಇಲ್ಲವಾದರೆ ನಾವು ಪಾಪ ಮಾಡುತ್ತ ಸಂಕಟ ಪಡುತ್ತೇವೆ. ನಾವು ದೇವರಾತ್ಮನಿಗೆ ವಿಧೇಯರಾದಷ್ಟೂ ನಮ್ಮ ಜೀವಿತಗಳು ದೇವರ ಸ್ವಬಾವದಿಂದ ಕಂಗೊಳಿಸುತ್ತವೆ. ಗಲಾತ್ಯದವರಿಗೆ ೫:೨೨ರಲ್ಲಿ ಆ ಫಲಗಳನ್ನು ಕಾಣಬಹುದು. ದೇವರಲ್ಲಿ ಜೀವಿಸುವುದು ಎಂದರೆ ದೇವರಾತ್ಮನಿಗೆ, ವಾಕ್ಯಕ್ಕೆ ವಿಧೇಯರಾಗಿದ್ದು, ನಮ್ಮನ್ನು ಪ್ರತಿದಿನ ದೇವರಿಗೆ ಸಮರ್ಪಿಸಿಕೊಳ್ಳುತ್ತಾ, ದೇವರಿಂದ ಹಾಗೂ ಆತನ ವಾಕ್ಯದಿಂದ ತುಂಬಲ್ಪಟ್ಟು ಜೀವಿಸುವುದು. ಹಲ್ಲೆಲೂಯ, ಆಮೆನ್.

ಕಾಮೆಂಟ್‌ಗಳಿಲ್ಲ: